ವಾಟರ್ಲೂ -
	ನೆಪೋಲಿಯನ್ ಮತ್ತು ವೆಲ್ಲಿಂಗ್ಟನ್ನರ ನಡುವೆ 1815ರಲ್ಲಿ ಆದ ನಿರ್ಣಾಯಕ ಕದನದ ಸ್ಥಳ; ಬೆಲ್ಜಿಯಮ್ ರಾಷ್ಟ್ರದ ಬ್ರಸೆಲ್ಸ್ ನಗರದ ಆಗ್ನೇಯಕ್ಕೆ 16 ಕಿಮೀ ದೂರದಲ್ಲಿದೆ. ಲಿಪ್‍ಜಿಗ್ ಕದನದಲ್ಲಿ ಸೋತ ನೆಪೋಲಿಯನ್ ಎಲ್ಬಾ ದ್ವೀಪದಲ್ಲಿ ಬಂದಿಯಾಗಿದ್ದ. ಅಲ್ಲಿಂದ 1815 ಮಾರ್ಚ್ 1ರಂದು ತಪ್ಪಿಸಿಕೊಂಡು ಪ್ಯಾರಿಸ್ ತಲಪಿದಾಗ ಅವನೊಡನೆ 1000 ಸೈನಿಕರೂ 4 ಬಂದೂಕುಗಳೂ ಮಾತ್ರ ಇದ್ದುವು. ಧೈರ್ಯದಿಂದ ಪ್ಯಾರಿಸಿಗೆ ಹೋದಾಗ ಯಾವ ಅಡಚಣೆಯೂ ಇಲ್ಲದೆ ಅಧಿಕಾರ ಸ್ವೀಕರಿಸಿದ.

	ಅವನನ್ನು ಸೋಲಿಸಲು ಒಂದಾಗಿದ್ದ ಆಸ್ಟ್ರಿಯ, ಪ್ರಷ್ಯ, ರಷ್ಯ ಮತ್ತು ಇಂಗ್ಲೆಂಡುಗಳ ಅರಸರನ್ನು ಬೇರ್ಪಡಿಸಲಾಗದೆ ಕೇವಲ ಒಂದು ನೂರು ದಿನಗಳಲ್ಲಿ ಅವರ ಒಗ್ಗೂಡಿದ ಸೈನ್ಯದೊಡನೆ ನೆಪೋಲಿಯನ್ ಹೋರಾಡಬೇಕಾಯಿತು. ಅವನ ಮಿತ್ರ ನೇಪಲ್ಸ್‍ನ ದೊರೆ ಮುರಟ್ ಶತ್ರು ಸೈನ್ಯದ ಮೇಲೆ ಆತುರದಿಂದ ಯುದ್ಧಹೂಡಿ ಸೋತು ನೆಪೋಲಿಯನ್ನನ ಬಳಿ ಬಂದಾಗ ಅವನನ್ನು ತಿರಸ್ಕರಿಸಿದ. ಅದರಿಂದ ಒಬ್ಬ ನೆಚ್ಚಿನ ದಕ್ಷ ಯೋಧನನ್ನು ಕಳೆದುಕೊಂಡಂತಾಯಿತು. ನಂಬಿಕಸ್ಥ ಸೈನಿಕರಿದ್ದರೂ ದಕ್ಷ ದಳಪತಿಗಳಿಲ್ಲದೆ ಸಂಕಷ್ಟಕ್ಕೀಡಾದ. ಯುದ್ಧ ಆರಂಭವಾದಾಗ ಚಾಣಾಕ್ಷನಾದ ಮಾರ್ಷಲ್ ಡೆವೋ ಪ್ಯಾರಿಸಿನಲ್ಲಿ ಉಳಿದಿದ್ದ. ಸೇನಾ ನಾಯಕತ್ವ ವಹಿಸಿದ ಸಾಲ್ ಅನನುಭವಿ; ಎಡಬಲ ಸೈನ್ಯಗಳ ನೇತೃತ್ವವ ಹಿಸಿದ ನೇ ಮತ್ತು ಗ್ರೋಷಿ ಅವರು ಸಹ ದಕ್ಷರಾಗಿರಲಿಲ್ಲ. ನೆಪೋಲಿಯ ನ್ನನಿಗೆ ಸೋಲುಂಟಾಗುವ ಸಂಭವ ಹೆಚ್ಚಾಗಿತ್ತು; ಶತ್ರು ಸೈನ್ಯಕ್ಕಿಂತ ಕಡಿಮೆ ಸೈನ್ಯವಿದ್ದ ಆದರೆ ಅವನಲ್ಲಿ ಜಯಗಳಿಸುವ ಅಚಲ ವಿಶ್ವಾಸವಿತ್ತು. ಪರಿಸ್ಥಿತಿಯ ಅರಿವಿದ್ದ ಸೈನಿಕರಲ್ಲಿ ಉತ್ಸಾಹವಿರಲಿಲ್ಲ. 1815 ಜೂನ್ 15,16 ಮತ್ತು 17ರಂದು ನಡೆದ ಹೋರಾಟಗಳಲ್ಲಿ ನೆಪೋಲಿಯನ್ನನ ಸೈನ್ಯ ಚದುರಿತು. 18ರಂದು ವೆಲ್ಲಿಂಗ್ಟನ್ ಮತ್ತು ಬ್ರೂಷರ್ ಅವರ ಒಗ್ಗೂಡಿದ ಸೈನ್ಯ ವಾಟರ್ಲೂನಲ್ಲಿ ನಿರ್ಣಾಯಕವಾಗಿ ನೆಪೋಲಿಯನ್ನನನ್ನು ಸೋಲಿಸಿತು; ಸಿಂಹಾಸನ ತ್ಯಜಿಸಬೇಕಾಯಿತು. ಅದೇ ಜುಲೈ 14ರಂದು ಬ್ರಿಟಿಷರ ಕೈಸೆರೆಯಾಗಿ ಪುನಃ ಸೇಂಟ್‍ಹೆಲಿನ ದ್ವೀಪದಲ್ಲಿ ಸೆರೆಯಾಗಿ ಕೆಲಕಾಲಾನಂತರ ಅಲ್ಲಿ ನಿಧನಹೊಂದಿದ.

	ಈ ಅಮೋಘವಿಜಯಕ್ಕೆ ವೆಲ್ಲಿಂಗ್ಟನ್ನನ ಸಮಯೋಚಿತ ದಕ್ಷ ನಾಯಕತ್ವ ಮತ್ತು ಕಾರ್ಯಕ್ಷಮತೆಯೇ ಕಾರಣ. ಹೀಗೆ ವಾಟರ್ಲೂ ಕದನ ಪ್ರಪಂಚದ ಇತಿಹಾಸದಲ್ಲಿ ತನ್ನದೇ ಸ್ಥಾನ ಗಳಿಸಿಕೊಂಡಿದೆ. 	
			(ಜಿ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ